ಮಂಗಳೂರು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ನ ಎಲ್ಲ 47 ದಾಖಲೆ ಬರೆದ ಆಳ್ವಾಸ್
ವಿದ್ಯಾಗಿರಿ (ಮೂಡುಬಿದಿರೆ): ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ಸ್ (ಪುರುಷ-ಮಹಿಳಾ) ಎಲ್ಲ 47 ದಾಖಲೆಗಳನ್ನು ಬರೆದ ಅನನ್ಯವಾದ ದಾಖಲೆಗೆ ದೇಶದಲ್ಲೇ ಮೊದಲ ಬಾರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ (ಸ್ವಾಯತ್ತ) ಕಾಲೇಜು ಪಾತ್ರವಾಗಿದೆ.
ಅಲ್ಲದೇ, ಅಖಿಲ ಭಾರತ ಮಟ್ಟದ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ನಲ್ಲಿನ 47 ಕೂಟ ದಾಖಲೆಗಳ ಪೈಕಿ 6 ದಾಖಲೆಗಳನ್ನೂ ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕ್ರೀಡಾಪಟುಗಳು ಬರೆದಿದ್ದಾರೆ.
ವಿಶ್ವವಿದ್ಯಾಲಯ ಮಟ್ಟದಲ್ಲಿ ಪುರುಷರ 23 ಹಾಗೂ ಮಹಿಳಾ 23 ಸೇರಿದಂತೆ 46 ಹಾಗೂ ಮಿಕ್ಸೆಡ್ ರಿಲೇ ಸೇರಿ ಎಲ್ಲ ಒಟ್ಟು 47 ಕ್ರೀಡೆಗಳಲ್ಲಿ ಕೂಟದಾಖಲೆ ನಿರ್ಮಿಸಿದ ಭಾರತದ ಏಕೈಕ ಕಾಲೇಜು ಎಂಬ ಅಸಾಮಾನ್ಯ ಸಾಧನೆಯನ್ನು ಆಳ್ವಾಸ್ ಮೆರೆದಿದೆ.
ಅಷ್ಟು ಮಾತ್ರವಲ್ಲದೇ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಚಾಂಪಿಯನ್‌ಶಿಫ್‌ನ ಪುರುಷ, ಮಹಿಳಾ ಹಾಗೂ ಸಮಗ್ರ ಪ್ರಶಸ್ತಿಯನ್ನು 22 ಬಾರಿ ಆಳ್ವಾಸ್ ಮುಡಿಗೇರಿಸಿಕೊಂಡಿದೆ.
ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಬಾರಿಯ (2024) ಕ್ರೀಡಾಕೂಟ ನಡೆದಿದ್ದು, ಆಳ್ವಾಸ್ 569 ಅಂಕ ಪಡೆದು ಚಾಂಪಿಯನ್ ಆಗಿದ್ದರೆ, ದ್ವಿತೀಯ ಸ್ಥಾನ ಪಡೆದ ತಂಡವನ್ನು 460 ಅಂಕದ ಅಂತರದಲ್ಲಿ ಹಿಂದಿಕ್ಕಿದೆ. ಈ ಬಾರಿ 11 ನೂತನ ಕೂಟದಾಖಲೆಯನ್ನು ಆಳ್ವಾಸ್ ಕ್ರೀಡಾಪಟುಗಳು ನಿರ್ಮಿಸಿದ್ದಾರೆ.
ಈ ಸಾಧನೆಗೆ ಕಾರಣರಾದ ಎಲ್ಲ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್ ಅಭಿನಂದಿಸಿದ್ದಾರೆ.