ವೃತ್ತಿ ಜೀವನದಲ್ಲಿ ಶಿಸ್ತು ಮಹತ್ವದ್ದು: ಡಾ. ಗಿರಿಧರನ್
“ವೃತ್ತಿ ಜೀವನದಲ್ಲಿ ಹಣಕ್ಕಿಂತ ಶಿಸ್ತು ಬಹಳ ಮಹತ್ವದ್ದು. ನಾನು ಚಾರ್ಟರ್ಡ್ ಎಕೌಂಟೆಂಟ್ ಆಗೀಯೇ ತೀರುತ್ತೆನೆ ಎಂಬುದು ವಾಣಿಜ್ಯ ವಿದ್ಯಾರ್ಥಿಗಳ ಯಶಸ್ಸಿನ ಮಂತ್ರವಾಗಿರಬೇಕು. ಪರೀಕ್ಷೆಗಳಿಗೆ ಮಾನಸಿಕವಾಗಿ ನಿಮ್ಮೊಳಗೆ ಯೋಜನೆಗಳನ್ನು ಹಾಕಿಕೊಳ್ಳಿ” ಎಂದು ಚೆನ್ನೈ ಚಾರ್ಟರ್ಡ್ ಎಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯ ಜಂಟಿ ನಿರ್ದೇಶಕರು ಹಾಗೂ ದಕ್ಷಿಣ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ಡಾ.ಪಿ.ಟಿ.ಗಿರಿಧರನ್ ಹೇಳಿದರು.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಸಿಎ-ಸಿಪಿಟಿ-ಐಪಿಸಿಸಿ ಮೀಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಪಿ.ಟಿ.ಗಿರಿಧರನ್ ಅವರು, “ನಮ್ಮ ದೇಶದಲ್ಲಿ ಮಾಹಿತಿಯ ಅಭಾವವಿದೆ. ವಿದ್ಯಾರ್ಥಿಗಳು ಬರವಣಿಗೆ ಕೌಶಲ್ಯವನ್ನು ಬೆಳೆಸುವಲ್ಲಿ ವಿಫಲರಾಗುತ್ತಿದ್ದಾರೆ. ಯಾವ ಕ್ಷಣದಲ್ಲಿ ಜೀವನದ ಶಿಸ್ತು, ದಾರಿ ತಪ್ಪುತ್ತದೆಯೋ ಅದೇ ಕ್ಷಣದಲ್ಲಿ ನಮ್ಮ ಸಂಪೂರ್ಣ ಜೀವನ ವಿನಾಶದತ್ತ ಸಾಗುತ್ತದೆ” ಎಂದು ಸೂಚನೆ ನೀಡಿದರು.
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಿಎ-ಸಿಪಿಟಿ-ಐಪಿಸಿಸಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲು ಸಮ್ಮತಿ ಪಡೆದುಕೊಂಡ ಮೊದಲ ಕಾಲೇಜು ಆಳ್ವಾಸ್ ಆಗಿದ್ದು, ಒಳ್ಳೆಯ ರೀತಿಯಲ್ಲಿ ಮುಂದುವರೆಯಲಿ ಎಂದು ಎಂ.ಆರ್.ಪಿ.ಎಲ್‌ನ ನಿರ್ದೇಶಕ ಕ್ಯಾಪ್ಟನ್ ಜಾನ್ ಪ್ರಸಾದ್ ಮೆನೆಝಸ್ ಇದೇ ಸಂದರ್ಭದಲ್ಲಿ ಹಾರೈಸಿದರು.
ಸಿಎ-ಸಿಪಿಟಿ-ಐಪಿಸಿಸಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲು ಈಗಾಗಲೇ ಮೌಖಿಕ ಸಮ್ಮತಿ ದೊರಕಿದ್ದು, ಸದ್ಯದಲ್ಲೇ ಲಿಖಿತ ರೂಪದಲ್ಲೂ ಒಪ್ಪಿಗೆ ದೊರೆಯಲಿದೆ.
ಸಿಎ ಕಿರಣ್ ವಸಂತ್, ಅಡ್ವೊಕೇಟ್ ಉದಯ್ ಪ್ರಕಾಶ್ ಮುಳಿಯ ಹಾಗೂ ಪ್ರಾಂಶುಪಾಲರಾದ ಪ್ರೊ.ಕುರಿಯನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.