ವಿದ್ಯಾಗಿರಿ: “ಆರೋಗ್ಯವೇ ಮಹಾಭಾಗ್ಯ ಎನ್ನುವ ಮಾತು ನೆನಪಿರಲಿ, ಆರೋಗ್ಯವಂತರಾಗಿರಬೇಕಾದರೆ, ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಸುಡದಂತೆ ನೋಡಿಕೂಳ್ಳುವ ಜವಾಬ್ದಾರಿ ನಮ್ಮದಾಗಿರಬೇಕು, ಇಲ್ಲದಿದ್ದಲ್ಲಿ ಪರಿಸರಕ್ಕೆ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೆ ಮತ್ತು ಮನುಷ್ಯರ ಆರೋಗ್ಯಕ್ಕೆ ಹಾನಿಕಾರವಾಗಲಿದೆ” ಎಂದು ಮೈಸೂರಿನ ಲ್ಯಾಬ್ ಲ್ಯಾಂಡ್ ಸಂಸ್ಥೆಯ ಮುಖ್ಯನಿರ್ದೆಶಕಿಯವರಾದ ಡಾ. ಗೀತಾ ಸಿಂಗ್ ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಕೇಂದ್ರದ ಜೈವಿಕ ತಂತ್ರಜ್ಞಾನ ವಿಭಾಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಅಯೋಜಿಸಲಾಗಿರುವ ಎರಡು ದಿನದ ರಾಷ್ಟ್ರೀಯ ವಿಚಾರ ಸಮಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಿಭಾಗದ ಉಪಪರಿಸರಾಧಿಕಾರಿ, ಡಾ. ಎಚ್. ಲಕ್ಷ್ಮೀಕಾಂತ್, “ಸಮುದ್ರಕ್ಕೆ ತ್ಯಾಜ್ಯ ಎಸೆಯುವುದರಿಂದ ಸಮುದ್ರದ ನೀರು ಮಾಲಿನ್ಯವಾಗುತ್ತದೆ, ಇದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮವಾಗುತ್ತದೆ. ನಾವೆಲ್ಲರು ಈ ಬಗ್ಗೆ ಚಿಂತಿಸಬೇಕಾಗಿದೆ ಮತ್ತು ಸ್ವಚ್ಚತೆಯ ಕಡೆಗೆ ಗಮನ ಹರಿಸುವ ಕೆಲಸ ನಮ್ಮಿಂದಾಗಬೇಕು” ಎಂದು ಕಿವಿಮಾತು ಹೇಳಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಜೈವಿಕ ತಂತ್ರಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ರಾಮ ಭಟ್ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಶ್ರೀನಿಧಿ ಕಾರ‍್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸರಣಿ ವಿಚಾರಗೋಷ್ಠಿಗ ನಡೆದವು.