ಮೂಡುಬಿದಿರೆ: ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ವಿಶ್ವ ಮಲ್ಲಕಂಬ ಚಾಂಪಿಯನ್‍ಶಿಪ್‍ಗೆ ಭಾರತದಿಂದ 6 ಮಂದಿ ಆಯ್ಕೆಯಾಗಿದ್ದು, ಕರ್ನಾಟಕದಿಂದ ಆಳ್ವಾಸ್ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿ ವೀರಭದ್ರ ಮುದೋಳ್ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಮೊತ್ತಮೊದಲ ಬಾರಿ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೆಬ್ರವರಿ 16 ಮತ್ತು 17 ರಂದು ಮುಂಬೈಯ ದಾದರ್‍ನಲ್ಲಿ ನಡೆಯಲಿರುವ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ರಾಷ್ಟ್ರಗಳು ್ಲ ಪಾಲ್ಗೊಳ್ಳಲಿದ್ದು, ಭಾರತೀಯ ಮಲ್ಲಕಂಬಪಟುಗಳಿಗೆ ಫೆಬ್ರವರಿ 11ರಿಂದ 15ರವರೆಗೆ ಹೈದರಬಾದ್‍ನಲ್ಲಿ ವಿಶೇಷ ತರಬೇತಿ ಶಿಬಿರ ನಡೆಯಲಿದೆ. ಕರ್ನಾಟಕದಿಂದ ವೀರಭದ್ರ ಸೇರಿ ಮಧ್ಯ ಪ್ರದೇಶದಿಂದ ಇಬ್ಬರು, ಮಹಾರಾಷ್ಟ್ರದಿಂದ ಇಬ್ಬರು ಹಾಗೂ ತಮಿಳುನಾಡಿನಿಂದ ಓರ್ವ ಮಲ್ಲಕಂಬಪಟು ಆಯ್ಕಾಯಾಗಿದ್ದಾರೆ.
ಕರ್ನಾಟಕದಿಂದ ಆಯ್ಕೆಯಾಗಿರುವ ವೀರಭದ್ರ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ. ಮಲ್ಲಕಂಬ ವಿಭಾಗದಲ್ಲಿ ಒಟ್ಟು 75 ಮಂದಿ ವಿದ್ಯಾರ್ಥಿಗಳು ಉಚಿತವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ವೀರಭದ್ರ ಕೂಡ ಒಬ್ಬರು.