ಮೂಡಬಿದಿರೆ: ‘ಒಂದು ಶಿಕ್ಷಣ ಸಂಸ್ಥೆಗೆ ಹಳೆ ವಿದ್ಯಾರ್ಥಿಗಳೆಂದರೆ ಅಪರೂಪದ ಆಸ್ತಿಯಿದ್ದಂತೆ. ಆ ಸಂಸ್ಥೆಯ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರೆ ಅದರ ಶ್ರೇಯಸ್ಸು ಹಳೆಯ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ’ ಎಂದು ಆಳ್ವಾಸ್ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಜೀವನ್ ರಾಮ್ ಅಭಿಪ್ರಾಯಪಟ್ಟರು.
ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ಕಲಿತು ಈಗ ನಾಲ್ಕು ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ‘ಅಭಿವ್ಯಕ್ತಿ’ ಮೀಡಿಯಾ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೊಸ ವಿದ್ಯಾರ್ಥಿಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
“ಪತ್ರಿಕೋದ್ಯಮ ಕ್ಷೇತ್ರವೆಂಬುದು ಹರಿಯುವ ನೀರಿನಂತೆ. ಈ ಕ್ಷೇತ್ರದಲ್ಲಾಗುತ್ತಿರುವ ಶೀಘ್ರಗತಿಯ ಬದಲಾವಣೆಗಳಿಗೆ ನಮ್ಮನ್ನು ನಾವು ಬಗ್ಗಿಸಿಕೊಳ್ಳಬೇಕು. ಪತ್ರಿಕೋದ್ಯಮ ಪದವಿ ಪಡೆದವರಿಗೆ ಬೇರೆ ಕ್ಷೇತ್ರಗಳಲ್ಲಿಯೂ ಕೂಡ ಸರಿಸಮಾನವಾದ ಅವಕಾಶಗಳಿವೆ. ಆ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇ ಕಾದದ್ದು ತುಂಬಾ ಮುಖ್ಯ” ಎಂದು ಅವರು ತಿಳಿಸಿದರು.
ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಸಮಯವೆಂಬುದು ಅತ್ಯಮೂಲ್ಯ ಎಂದು ಸಮಯದ ಪಾಲನೆಯ ಬಗ್ಗೆ ಕಿರಿಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೊತೆಗೆ, ಈ ಸಂದರ್ಭ ಗಳಿಸುವ ಅನುಭವವೇ ಮುಂದೆ ವಿದ್ಯಾರ್ಥಿಗಳನ್ನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಧೃಢವಾಗಿ ನಿಲ್ಲುವಲ್ಲಿ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೌಮ್ಯಾ ಆರುಂಬೋಡಿ, ಶ್ರೀಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ರಕ್ಷಿತಾ ಕುಮಾರಿ, ಪ್ರಜಾವಾಣಿ ದಿನಪತ್ರಿಕೆಯಲ್ಲಿ ಅಪ್ರೆಂಟೈಸ್ ಪತ್ರಿಕೋದ್ಯಮಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಪ್ರಿಯ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಸಂಚಾಲಕರಾಗಿರುವ ದೀವಿತ್ ಕೋಟ್ಯಾನ್ ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಳೆ ವಿದ್ಯಾರ್ಥಿಗಳು. ತಮ್ಮ ವಿವಿಧ ಕ್ಷೇತ್ರಗಳ ಕಾರ್ಯವ್ಯಾಪ್ತಿಯ ಬಗ್ಗೆ ಅವರು ಮಾತನಾಡಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯಾ ಜೀವನ್, ಉಪನ್ಯಾಸಕರಾದ ಶ್ರೀನಿವಾಸ ಪೆಜತ್ತಾಯ, ಪ್ರಸಾದ್ ಶೆಟ್ಟಿ ಮತ್ತು ದೇವಿಶ್ರೀ ಶೆಟ್ಟಿ ಉಪಸ್ಥಿತರಿದ್ದರು.