‘30ನೇ ಆಳ್ವಾಸ್ ವಿರಾಸತ್’ ಡಿಸೆಂಬರ್ 10ರಿಂದ15

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’’ನ 30ನೇ ಆವೃತ್ತಿಯು ಇದೇ ಡಿಸೆಂಬರ್ 10ರಿಂದ 15ರ ವರೆಗೆ ಇಲ್ಲಿನ ವಿದ್ಯಾಗಿರಿಯ ಆವರಣದಲ್ಲಿ ವೈಭವದಿಂದ ನಡೆಯಲಿದೆ.
ಈ ಕುರಿತು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ। ಮೋಹನ ಆಳ್ವ ಅವರು, ವಿರಾಸತ್ ಸಂದರ್ಭದಲ್ಲಿ ಅಪೂರ್ವ ಮತ್ತು ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂಸ್ಕೃತಿ ಹಾಗೂ ಕಲಾ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ‘30ನೇ ಆಳ್ವಾಸ್ ವಿರಾಸತ್-2024’ನ್ನು ಅತ್ಯಂತ ಯಶಸ್ವೀ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ವಿವಿಧ ಮೇಳಗಳು ಮೆರುಗು ನೀಡಲಿವೆ ಎಂದು ವಿವರಿಸಿದರು.

ಒಟ್ಟು 6 ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ವೈಭವದಿಂದ ಜರುಗಲಿದೆ. ಮೊದಲ 05 ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತುಗಳ ವಸ್ತು ಪ್ರದರ್ಶನಗಳಿದ್ದು, ಕೊನೆಯ ದಿನವಾದ ಡಿಸೆಂಬರ್ 15ರ ಭಾನುವಾರವನ್ನು ಕೇವಲ ವಸ್ತು ಪ್ರದರ್ಶನಗಳಿಗಾಗಿಯೇ ಮೀಸಲಿಡಲಾಗಿದೆ. ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶವಿದ್ದು, ಸಂಸ್ಕೃತಿ ಪ್ರಿಯರೂ, ಕಲಾಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.