Alva's College, Moodbidri

ಭಾಗವತಿಕೆಯಲ್ಲಿ ಶ್ರದ್ಧಾಪೂರ್ವಕ ಕಲಿಕೆ ಅಗತ್ಯ: ಜೀವನ್‍ರಾಮ್ ಸುಳ್ಯ

yakshagana1

ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಭಾಗವತಿಕೆ ಮತ್ತು ಚೆಂಡೆಮದ್ದಳೆ ಅಭ್ಯಾಸ ತರಗತಿಯನ್ನು ಆರಂಭಿಸಲಾಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ರಂಗಕರ್ಮಿ ಜೀವನ್‍ರಾಮ್ ಸುಳ್ಯ ಅಭ್ಯಾಸ ತರಗತಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜೀವನ್ ರಾಮ್ ಸುಳ್ಯ ಮಾತನಾಡಿ, ಭಾಗವತಿಕೆಯೆಂಬುದು ಸಾಮಾನ್ಯ ವಿದ್ಯೆಯಲ್ಲ. ಅದನ್ನು ಕಲಿಯಲು ಸಾಕಷ್ಟು ಶ್ರದ್ಧೆ ಹಾಗೂ ಪರಿಶ್ರಮ ಅಗತ್ಯವಾಗಿ ಬೇಕು. ಫ್ಯಾಶನ್‍ಗಾಗಿ ಅಥವಾ ಕೇವಲ ತೋರ್ಪಡಿಕೆಗಾಗಿ ಭಾಗವತಿಕೆಯನ್ನು ಕಲಿಯತ್ತೇವೆಂದರೆ ಅದು ಖಂಡಿತ ಸಾಧ್ಯವಿಲ್ಲ. ವಿದ್ಯೆಗೆ ನಮ್ಮನ್ನು ಶ್ರದ್ಧಾಪೂರ್ವಕವಾಗಿ ಒಪ್ಪಿಸಿಕೊಳ್ಳುವ ಗುಣವಿದ್ದಾಗ ಮಾತ್ರ ಕಲಾಸರಸ್ವತಿ ಒಲಿಯಲು ಸಾಧ್ಯ ಎಂದರು.
ಅಭ್ಯಾಸ ತರಗತಿಯನ್ನು ನಡೆಸಿಕೊಡಲು ಖ್ಯಾತ ಯಕ್ಷಗಾನ ಕಲಾವಿದರಾದ ಲೀಲಾವತಿ ಬೈಪಡಿತ್ತಾಯ ಹಾಗೂ ಹರಿನಾರಾಯಣ ಬೈಪಡಿತ್ತಾಯ ಆಗಮಿಸಿದ್ದರು. ಬೈಪಡಿತ್ತಾಯ ದಂಪತಿಗಳ ಬಗ್ಗೆ ಮಾತನಾಡಿದ ಜೀವನ್‍ರಾಮ್ ಸುಳ್ಯ, ಕಲೆಗಾಗಿ ತಮ್ಮನ್ನೇ ಮೀಸಲಿರಿಸಿಕೊಂಡಿರುವವರು ಬೈಪಡಿತ್ತಾಯ ದಂಪತಿಗಳು. ಯಕ್ಷಗಾನ ಒಂದು ಗಂಡುಕಲೆ ಎಂಬ ಭಾವನೆ ಆಳವಾಗಿ ಬೇರೂರಿದ್ದಾಗಲೇ ರಂಗಕ್ಕೆ ಬಂದು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಲೀಲಾವತಿ ಬೈಪಡಿತ್ತಾಯ. ಅಂತಹ ಕಲಾವಿದರ ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸೂಕ್ತವಾಗಿ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಲೀಲಾವತಿ ಬೈಪಡಿತ್ತಾಯ, ಹರಿನಾರಾಯಣ ಬೈಪಡಿತ್ತಾಯ ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಿಬ್ಬಂದಿ ವರ್ಗ ಹಾಗೂ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Highslide for Wordpress Plugin